ಬುಧವಾರ, ಮೇ 5, 2021

ಕಡಲ ತೀರ

 ಕಡಲ ತೀರದಲ್ಲಿ 

ತೀರದ ನೋವುಂಡು 

ಅಪ್ಪಳಿಸುತ್ತಿರುವ 

ಅಲೆಗಳ 

ಸಪ್ಪಳದ ಶಬ್ದದ ಕೂಗು;

ಗುಂಡಿಗೆಯ ಗೂಡೆಲ್ಲಾ 

ತುಕ್ಕಿಡಿದು,

ಸದ್ದೇ ಕೇಳಾದಂತಾಗಿರುವ

ಕಿವಿಗಳು ಕಲ್ಲಾಗಿರುವ 

ದಡಕ್ಕೆ ಎಂತಾ 

ವ್ಯತ್ಯಾಸ ಮಾಡಬಲ್ಲದು!!


-ಗೂಳೂರು ಚಂದ್ರು

ನಂಟಿನ ಗಂಟು

 ಬೆಳಕು, ಕತ್ತಲೆಗೆ

ಕತ್ತಲೆ, ಬೆಳಕಿಗೆ ನಂಟು
ಸೂರ್ಯ, ಚಂದ್ರ;
ಭೂಮಿಗೆ ನಂಟು
ಗಾಳಿ, ನೀರು ದೇಹಕೆ ನಂಟು

ಸೂರ್ಯಕಾಂತಿ ಹೂವಿಗೆ,
ಸೂರ್ಯನ ನಂಟು
ಹರಿಯುವ ನದಿ ಕಡಲಿಗೆ ನಂಟು
ಲೇಖನಿ ಬಿಡಿ ಹಾಳೆಗೆ ನಂಟು

ನಿನ್ನೆ ಇಂದಿಗೆ, ಇಂದು
ನಾಳೆಗೆ ನಂಟು
ಇಲ್ಲಿ ಎಲ್ಲರೂ, ಎಲ್ಲರಿಗೂ ನೆಂಟರೇ
ಕಿಸೆ ತುಂಬಾ ಗಂಟಿದ್ದರೇ!!

-ಗೂಳೂರು ಚಂದ್ರು

ಭಾನುವಾರ, ಮೇ 24, 2020

ಗೌತಮ


ಶಾಂತಿಪರ್ವತದ ಕೆಳಗಿನ ದಟ್ಟ ಅಭಯಾರಣ್ಯದಲಿ ಕಗ್ಗತ್ತಲ ದಾರಿಯಲಿ ತಿವ್ರಶೀತದಿಂದ ಮರಗಟ್ಟಿದ ದೇಹದೊಂದಿಗೆ, ಹೆಪ್ಪುಗಟ್ಟಿದ ಪಾದಗಳ ಹಿಮ್ಮಡಿ ಬಿರುಕು ಬಿಟ್ಟು ರಕ್ತ ತೊಟ್ಟುಕ್ಕುತ್ತಿದ್ದ ಪಾದಗಳನ್ನು ಎಳೆದುಕೊಂಡು ಹೆಜ್ಜೆ ಮೇಲೊಂದು ಹೆಜ್ಜೆಗಳನ್ನ ಇಡುತ್ತಿದ್ದ ಗೌತಮನಿಗೆ ಪ್ರತಿ ಹೆಜ್ಜೆಗಳನ್ನ ನೆಲದ ಮೇಲೆ ಸೋಕಿಸುವಾಗ ಜೀವ ಹಾರಿ ಮತ್ತೆ ಬಂದಂತಾಗುತಿತ್ತು. ಜೊತೆಗೆ ಹಸಿವು ಕೊಡುತ್ತಿದ್ದ ಹಿಂಸೆಗೆ ಆ ಚಳಿಯಲ್ಲು ಕಣ್ಣಹನಿಗಳು ಕೆನ್ನೆಯ ಒದ್ದೆಮಾಡಿದ್ದವು.


ಹೇಗಾದರೂ ನೀಲಗಿರಿ ರೈಲ್ವೆ ಸ್ಟೇಷನ್ ತಲುಪಲೇಬೇಕೆಂಬ ಹಠ,ಶೀತದಿಂದ ಪಾದಗಳು ಹೆಪ್ಪುಗಟ್ಟಿದ್ದಕಿಂತ ತುಸು ಹೆಚ್ಚೇ ಗೌತಮನ ಮೆದುಳು ಹೆಪ್ಪುಗಟ್ಟಿತ್ತು. ತನ್ನ ಜೀವಮಾನದ ಆಸೆಯಿಂದಾಗಿ, ಏನನ್ನೋ ಸಾಧನೆ ಮಾಡಬೇಕೆಂಬ ಆಸಕ್ತಿಯಿಂದ ಶಾಂತಿಪರ್ವತ ಹೊಕ್ಕ ಗೌತಮ ವಾರ ಕಳೆಯುವದರಲ್ಲಿ ಶಾಂತಿಪರ್ವತದಿಂದ ಹಿಂದಿರುಗಲು ತಿರ್ಮಾನಿಸಿ ವಾಪಸ್ಸು ಹೊರಟಿದ್ದ. ತಾನು ನೆಡೆದು ಬಂದ ಬದುಕಿನ ದಾರಿಗಿಂತ ಕಷ್ಟವಿರಲಿಲ್ಲ ಈ ಶಾಂತಿಪರ್ವತದ ದಟ್ಟ ಅರಣ್ಯದಲ್ಲಿ ಕೊರೆಯುವ ಚಳಿಯಲ್ಲಿ ಕಡುಗತ್ತಲ ರಾತ್ರಿಯಲಿ ಒಬ್ಬನೆ ದೆವ್ವದಂತೆ ಹೆಜ್ಜೆಸಾಗಿಸುವುದು. ಮೂವತೈದು ವರ್ಷದ ಮದುವೆಯಾಗದ ಯುವಕ ಗೌತಮ ಆ ವಯಸ್ಸಿಗೆ; ಅಘೋರಿಗಳು, ಋಷಿಮುನಿಗಳು ಲೌಕಿಕ ಬದುಕಿನಿಂದ ಮುಕ್ತಿ ಬಯಸುವವರು, ಸಂಸಾರದ ತೊಂದರೆ ತಾಪತ್ರೆಯಗಳು ಬೇಕಿಲ್ಲದವರು ವಾಸಿಸುವ ಶಾಂತಿಪರ್ವತಕ್ಕೆ ಯಾಕೆ ಬಂದ ತನ್ನ ಅಲ್ಲಿಯವರೆಗಿನ ಬದುಕಲ್ಲಿ ನೆಡೆದ ಅನಿರೀಕ್ಷಿತ ದುರಂತಗಳು,ನಾನು ಈ ಸಮಾಜದಲ್ಲಿ ಬದುಕಲು ಯೊಗ್ಯನಲ್ಲ ಎಂಬ ತಿರ್ಮಾನಕ್ಕೆ ತಂದು ನಿಲ್ಲಿಸಿದ್ದವು. ಗೌತಮ ತನ್ನ ಬದುಕಿನ ದಾರಿಯನ್ನ ಮತ್ತೊಮ್ಮೆ ನೆನಪಿಸಿಕೊಂಡು ಹೆಜ್ಜೆಗಳನ್ನಿಟ್ಟ.



ಬಾಲ್ಯ


ಗೌತಮ ಅಲಿಯಾಸ್ ಗೌತಮಶಾಸ್ತ್ರಿ ಒಬ್ಬ ಬಡ ಬ್ರಾಹ್ಮಣ ರಂಗಾಶಾಸ್ತ್ರಿಯ ಏಕೈಕ ಸುಪುತ್ರ. ಗೌತಮ ಜನಿಸಿ ಸುಮಾರು ಒಂದುವರೆ ವರ್ಷಕ್ಕೆ ತಾಯಿ ಸುಮಿತ್ರಾದೇವಿ ಮರಣವಾಗುತ್ತಾಳೆ. ತಾಯಿಕಳೆದುಕೊಂಡ ಗೌತಮನನ್ನು ತಂದೆ ಹಾಗೂ ತಾಯಿಯಾಗಿ ರಂಗಾಶಾಸ್ತ್ರಿ ಸಾಕುತ್ತಾನೆ, ಗೌತಮನ ಮೇಲೆ ಸಾವಿರ ಕನಸುಗಳನ್ನು ಕಟ್ಟುತ್ತಾನೆ, ಎಲ್ಲಾ ತಂದೆಯರಂತೆ ತನ್ನ ಮಗನನ್ನ ಡಾಕ್ಟರ ಅಥವಾ ಇಂಜನಿಯರ್ ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿ ತುಂಬು ಶ್ರದ್ದೆಯಿಂದ ಹಾಗು ಶಿಸ್ತಿನಿಂದ ಬೆಳಸುತ್ತಾನೆ.

ರಂಗಾಶಾಸ್ತ್ರಿ ತನ್ನ ಪರಿಶ್ರಮವನ್ನ ಗೌತಮನ ವಿದ್ಯಾಬ್ಯಾಸ ಮತ್ತು ಅವನ ಎಲ್ಲಾ ಪರೀಕ್ಷೆಗಳ ಫಲಿತಾಂಶಗಳಲ್ಲಿ ನೋಡುತ್ತೀರುತ್ತಾನೆ. ಗೌತಮ ಏಳನೇ ತರಗತಿಯಲ್ಲಿ ಮೊದಲನೇ ರ‍್ಯಾಂಕ್ ನಲ್ಲಿ ಉತ್ತಿರ್ಣನಾದಾಗ ರಂಗಾಶಾಸ್ತ್ರಿಗೆ ಆಕಾಶವೇ ಕೈಗೆ ಸಿಕ್ಕಷ್ಟು ಆನಂದವಾಗಿತ್ತು. ಮಗನ ಮೇಲೆ ಕನಸಿನ ಕೋಟೆಗಳು ಹೆಚ್ಚುತಲೇ ಹೋದವು.

ಮನೆಯ ಹೊರಂಗಣದ ಜಗುಲಿಯ ಮೇಲೆ ಕುಳಿತಿದ್ದ ರಂಗಾಶಾಸ್ತ್ರಿಯ ಮನಸ್ಸು ಗೌತಮನನ್ನು ಡಾಕ್ಟರ್ ಹಾಗೂ ಎಂಜನಿಯರ್ ವೇಷದಲ್ಲಿ ಕಲ್ಪಿಸಿಕೊಂಡು ನಲಿದಾಡುತಿತ್ತು.ಎಂಟನೆ ತರಗತಿಗೆ ಮಗನನ್ನ ಇಂಗ್ಲಿಶ್ ಶಾಲೆಗೆ ಸೇರಿಸಬೇಕೆಂಬ ಆಸೆ ಮನಸ್ಸೆಂಬ ಮನೆ ತುಂಬಾ ತುಂಬಿದ್ದರೂ, ವಾಸ್ತವ ಮನಸ್ಸೆಂಬ ಮನೆಯ ಕಿಟಕಿಯ ಸಂಧಿಯಲ್ಲಿಇಣುಕಿ ನೋಡುತಿತ್ತು; ಮಧುವೆ, ಮುಂಜಿ, ಗೃಹಪ್ರವೇಶ, ತಿಥಿ ಇತ್ತ್ಯಾದಿ ಕಾರ್ಯಕ್ರಮಗಳನ್ನು ನೆಡೆಸಿಕೊಡುತ್ತಿದ್ದ ಒಬ್ಬ ಬಡ ಬ್ರಾಹ್ಮಣ ರಂಗಾಶಾಸ್ತ್ರಿ ನೀ ಹೇಗೆ ನಿನ್ನ ಮಗನನ್ನು ಇಂಗ್ಲಿಶ್ ಶಾಲೆಗೆ ಸೇರಿಸಿ ಸಾವಿರಾರು ರುಪಾಯಿ ಫೀಸ್ ಕಟ್ತಿ ಅಂತ ಮತ್ತೊಮ್ಮೆ ವಾಸ್ತವ ಪ್ರಶ್ನೆ ಮಾಡ್ತಾ ಮನಸ್ಸಿನ ಮನೆಯ ಕಿಟಕಿಯಿಂದ ನುಗ್ಗಿ ಮನಸಿನ ಮನೆತುಂಬಾ ಹರಡಿತ್ತು.

ವಾಸ್ತವ ಅರಿತ ರಂಗಾಶಾಸ್ತ್ರಿ ಸಂಧ್ಯಾವಂದನೆಗೆ ಸಮಯವಾದ್ದರಿಂದ ಎದ್ದು ಸಂಧ್ಯಾವಂದನೆ ಮುಗಿಸಿ ತನ್ನ ಇಷ್ಟದ ದೇವರು ಶ್ರೀ ನಾರಯಣಸ್ವಾಮಿಗೆ ಗೌತಮನನ್ನು ಇಂಗ್ಲಿಶ್ ಶಾಲೆಗೆ ಸೇರಿಸಲು ಅನುವು ಮಾಡಿಕೊಡಲು ಬೇಡಿಕೆಯನಿಟ್ಟು, ಮಗನನ್ನು ಇಂಗ್ಲಿಶ್ ಶಾಲೆಗೆ ಸೇರಿಸಲೇಬೆಕೆಂದು ಪಣತೊಟ್ಟು ಮನಸ್ಸಿನಲ್ಲೆ ಲೆಕ್ಕಚಾರವಾಕತೊಡಗಿದ ಹಣ ಎಷ್ಟಾಗಬಹುದೆಂದು ಹಾಗು ಹೇಗೆ ವಂಚಿ ಕೊಳ್ಳಬೇಕೆಂದು,

ತುಂಬಾ ಸ್ವಾಭಿಮಾನಿಯಾಗಿದ್ದ ರಂಗಾಶಾಸ್ತ್ರಿ ಸಂಭದಿಕರನ್ನೆಲ್ಲಾ ದೂರವೆ ಇಟ್ಟಿದ್ದ, ಆದ ಕಾರಣ ಗೌತಮ ತನ್ನ ತರಗತಿಯ ಪರೀಕ್ಷೆಯ ನಂತರದ ಬೇಸಿಗೆ ರಜಗಳಲ್ಲಿ ತನ್ನ ಮನೆಯಲ್ಲೆ ಉಳಿದುಕೊಳ್ಳಬೇಕಾಗುತ್ತಿತ್ತು, ಅದು ಏಳನೇ ತರಗತಿಯ ಪರೀಕ್ಷೆಯ ನಂತರದ ಬೇಸಿಗೆ ರಜೆಯಲ್ಲು ಮುಂದುವರೆದಿತ್ತು. ಸಾಮಾನ್ಯವಾಗಿ ಎಲ್ಲಾ ಗೌತಮನ ಸ್ನೇಹಿತರುಗಳು ತಮ್ಮ ತಮ್ಮ ಅಜ್ಜ ಅಜ್ಜಿಯಂದಿರ ಊರುಗಳಿಗೆ ಬೇಸಿಗೆ ರಜೆಗಳಿಗೆ ಹೊರಟುಹೋಗುತ್ತಿದ್ದರು. ಗೌತಮ ಹಾಗೂ ತನ್ನ ಕೇಲವೇ ಗೆಳೆಯರೊಂದಿಗೆ ಪ್ರತಿದಿನ ಆಟವಾಡುತ್ತಿದ್ದ.


ಒಂದು ದಿನ ತನ್ನ ಗೆಳೆಯರು ಆಟವಾಡಲು ಬರದ ಕಾರಣ, ತನ್ನ ಮನೆಯ ಪಕ್ಕದ ಅಂಗಳದಲ್ಲಿ ಬೇರೆ ಬೀದಿಯ ಹುಡುಗರೊಂದಿಗೆ ಆಟವಾಡುತ್ತಿದ್ದ, ಕೆಲಸದ ಮೇಲೆ ಹೊರಗೆ ಹೋಗಿದ್ದ ರಂಗಾಶಾಸ್ತ್ರಿ ಮನೆಗೆ ಬಂದ ಗೌತಮ ಮನೆಯಲ್ಲಿಲ್ಲದ್ದನ್ನ ಕಂಡು ಮನೆಯ ಹೊರಗಡೆ ಬಂದು ಕಣ್ಣಾಡಿಸಿದ ಮನೆಯ ಪಕ್ಕದ ಅಂಗಳದಲ್ಲಿ ಬೇರೆ ಬೀದಿಯ ಹುಡುಗರ ಜೊತೆ ಆಡುತ್ತಿದ್ದ ಗೌತಮನನ್ನು ಕಂಡ ರಂಗಾಶಾಸ್ತ್ರಿಗೆ ಕೋಪ ನೇತ್ತಿಗೇರಿತ್ತು. ಸೀದಾ ಆಟದ ಅಂಗಳದ ಕಡೆಗೆ ನೆಡೆದ ರಂಗಾಶಾಸ್ತ್ರಿ ಗೌತಮನ ಕೆನ್ನೆಗೆ ಬಾರಿಸಿ ಅವನ ಕೈಗಳನ್ನು ಹಿಡಿದು ಧರಧರನೇ ಎಳೆದುಕೊಂಡು ಮನೆಯ ಮುಂದಿನ ತೊಟ್ಟಿಯ ಮುಂದೆ ಕೂರಿಸಿ ಬಿಂದಿಗೆಯಿಂದ ನೀರನ್ನು ತೆಗೆದು ಗೌತಮನ ತಲೆ ಮೇಲೆ ಸುರಿಯುತ್ತಾನೆ.


ತಾನು ಏನು ತಪ್ಪು ಮಾಡಿದೆ ಎಂಬ ಅರಿವಿಲ್ಲದ ಗೌತಮನಿಗೆ ತನ್ನ ಕೈಯಿಂದ ಬಾರಿಸಿಕೊಂಡ ಕೆನ್ನೆ ಕೆಂಪಾಗಿರುತ್ತದೆ, ಆಟದ ಅಂಗಳದಿಂದ ತೊಟ್ಟಿಯವರೆಗೂ ಎಳೆದುಕೊಂಡು ಬಂದು ತನ್ನ ಮೇಲೆ ನೀರು ಸುರಿಯುವವರೆಗೂ ತನ್ನ ತಂದೆಯ ಮುಖ ಕೆಂಪಾಗಿದ್ದನ್ನು ಕಂಡು ಗೌತಮನಿಗೆ ಆಶ್ಚರ್ಯವಾಗುತ್ತದೆ. ಎಂದಿಗೂ ತನ್ನ ಮೇಲೆ ಆಷ್ಟು ಕೋಪಗೊಡಿದ್ದನ್ನ ನೋಡಿರದ ಗೌತಮ ದಿಗ್ಬ್ರಂತನಾಗುತ್ತಾನೆ. ರಂಗಾಶಾಸ್ತ್ರಿಯೂ ಒಂದು ಬಿಂದಿಗೆ ನೀರು ಸುರಿದುಕೊಂಡು ಅಪ್ಪ ಮಗ ಇಬ್ಬರು ಮನೆ ಒಳಗೆ ನಡೆಯುತ್ತಾರೆ. ಕೆಲನಿಮಿಷಗಳು ಕಳೆದ ಬಳಿಕ ಗೌತಮ ತನ್ನ ತಂದೆಗೆ ಕೇಳುತ್ತಾನೆ ತನ್ನ ಕೆನ್ನೆಗೆ ಬಾರಿಸಿದ ಕಾರಣವ; ಇನ್ನು ಕೋಪವಿಳಿಯದ ಕೆಂಡಮಂಡಲವಾಗಿದ್ದ ರಂಗಾಶಾಸ್ತ್ರಿ ಗೌತಮನನ್ನೇ ದುರುಗುಟ್ಟುತ್ತಾ ನಾವು ಬ್ರಾಹ್ಮಣರು, ನಾವು ಮಾನವ ಜನಾಂಗದಲ್ಲಿಯೇ ಶ್ರೆಷ್ಠರು, ನಮ್ಮ ಜಾತಿ ಎಲ್ಲಾ ಜಾತಿಗಿಂತ ದುಪ್ಪಟ್ಟು ಶ್ರೇಷ್ಠ. ಆಟದ ಅಂಗಳದಲ್ಲಿ ನಿನ್ನ ಜೊತೆ ಆಡುತ್ತಿದ್ದ ಹುಡುಗರು ಕೀಳು ಜಾತಿಯವರು ಅವರನ್ನ ಮುಟ್ಟಿಕೊಳ್ಳಬಾರದು ಅವರ ಜೊತೆ ಬೆರೆಯಬಾರದು. ನಾವು ಎಲ್ಲವನ್ನು ತಿಳಿದವರು ವೇದ ಉಪನಿಶತ್ತುಗಳು ಮಂತ್ರಗಳು ಯಜ್ಞಗಳು ನಮ್ಮ ಆಸ್ತಿ ಇವೆಲ್ಲೆವುದರ ಕನಿಷ್ಟ ಜ್ಞಾನವು ಇಲ್ಲದಂತ ಈ ಕೀಳುಜಾತಿಯವರ ಜೊತೆ ಬೆರೆಯುತಿರುವೆಯೆಲ್ಲಾ ಇದನ್ನೇನಾ ನೀನು ಇಲ್ಲಿಯವರೆಗೂ ಕಲಿತಿದ್ದು? ನಾವು ಬಡವರು ಇರಬಹುದು ಜಾತಿ ಕೆಟ್ಟವರಲ್ಲಾ. ಮತ್ತೇ ಈ ಕೀಳು ಜಾತಿಯವರೊಂದಿಗೆ ಸೇರಬೇಡ. ಆಟವಾಡಲೇಬೇಕೆಂದರೆ ನಮ್ಮ ಜಾತಿಯವರೊಂದಿಗೆ ಮಾತ್ರ ಆಡು. ನಾನು ನನ್ನ ದರ್ಮದ ಹಾಗು ಜಾತಿಯ ತತ್ವಗಳೊಂದಿಗೆ ಬದುಕುತ್ತಿದ್ದೆನೆ ನಮ್ಮಲ್ಲಿ ಮಡಿ ಮೈಲಿಗೆಗಳುಂಟು ಅರ್ಥ ಮಾಡಿಕೊ ಗೌತಮ ಎಂದು ಹೇಳುವಷ್ಟ್ರಲ್ಲಿ ರಂಗಾಶಾಸ್ತ್ರಿಯ ಕೋಪ ಕಡಿಮೆಯಾಗಿತ್ತು.

ಜಾತಿ ದರ್ಮದ ಅರಿವೇ ಇಲ್ಲದ ಹನ್ನೊಂದು ವರ್ಷದ ಗೌತಮನಿಗೆ ಇಲ್ಲಿಯವರೆಗೆ ತಮ್ಮ ಜಾತಿಯವರೊಂದಿಗೆ ಆಟವಾಡುತಿದ್ದು ಇಂದು ಬೇರೆ ಬೀದಿಯ ಹುಡುಗರೊಂದಿಗೆ ಆಟವಾಡಿದ್ದು ಇಷ್ಟೊಂದು ದೊಡ್ಡ ಆಪರಾಧವಾಯಿತಾ ಮತ್ತು ಇಲ್ಲಿಯವರೆಗು ತನ್ನ ತಂದೆಯ ಕೋಪ ನೋಡಿರದೇ ಇಂದು ನೋಡಿ ಗೌತಮ ಚಕಿತನಾದ. ಜಾತಿಯ ಬಗ್ಗೆ ತನ್ನ ತಂದೆ ಕೊಟ್ಟ ಉಪದೇಶದ ಬಗ್ಗೆ ಮನಸ್ಸು ಚಿಂತಿಸುತ್ತಿತ್ತು.

ತನ್ನ ತಂದೆಯ ಆಸೆಯಂತೆ ಗೌತಮ ಎಂಟನೆ ತರಗತಿಗೆ ಇಂಗ್ಲಿಶ್ ಮಾಧ್ಯಮದ ಮದನೂರಿನ S G K ಶಾಲೆಗೆ ಸೇರಿಕೊಂಡ. ಮದನೂರು ಒಂದು ತಾಲ್ಲೊಕು ಮದನೂರಿನಿಂದ ಗೌತಮನ ಊರಿಗೆ ಅಂದರೆ ಬಾಗೆಹಳ್ಳಿಗೆ ಸುಮಾರು ಹದಿನೈದು ಕೀಲೊಮೀಟರ್ ಶಾಲೆಯಿಂದ ಬಸ್ ವ್ಯವಸ್ತೆಯು ಇತ್ತು. ಮದ್ನೂರು ಆಗತಾನೇ ಹೋಬಳಿಯಿಂದ ತಾಲ್ಲೊಕ್ಕಿಗೆ ಬಡ್ತಿ ಪಡೇದಿತ್ತು. ಮದನೂರಿನಿಂದ ಆಯ್ಕೆಯಾಗಿದ್ದ ಶಾಸಕ ಗೀರಿಗೌಡ ಬಹಳ ಆಸ್ಥೆಯಿಂದ ತಾನು ಆಯ್ಕೆಯಾಗಿಬಂದ ಊರನ್ನು ಅಬಿವೃದ್ದಿಪಡಿಸಲು ಹೋಬಳಿಯಿಂದ ತಾಲ್ಲೊಕಿಗೆ ಪರಿವರ್ತಿಸಲು ಶ್ರಮಪಟ್ಟಿದ್ದ. ಮದನೂರಿನಲ್ಲಿದ್ದ ಗೀರಿಗೌಡನ ಒಂದು ಬಾರು ಈಗ ನಾಲ್ಕಾಗಿದ್ದವು, ಒಂದು ಪುಟ್ಟ ಶಾಲೆ ಕಾಲೇಜಾಗಿ ಪರಿವರ್ತನೆಗೊಂಡು ಇನ್ನೂ ನಾಲ್ಕು ಕಾಲೇಜ್ ಗಳು ಆರಂಭವಾಗಿದ್ದವು. ಅಬಿವೃದ್ದಿ ಊರಿನದ್ದೋ ಅಥವಾ ಗೀರಿಗೌಡನದ್ದೊ ತಿಳಿಯಾದಾಗಿತ್ತು ಊರಿನ ಜನಕ್ಕೆ. ಗೀರಿಗೌಡನ ಒಡೆತನಕ್ಕೆ ಸೇರಿದ S G K ಶಾಲೆಯ ಮೊದಲನೆ ಬ್ಯಾಚ್ ತೆರ್ಗಡೆಯಾಗಿ ಎರಡನೇ ಬ್ಯಾಚ್ಗೆ ಗೌತಮ ಸೇರಿಕೊಂಡಿದ್ದ.

ಶಾಲೆ ಶುರುವಾಗಿ ದಿನಗಳು ಕಳೆದವು ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ಚುರುಕು ಹುಡುಗ ಗೌತಮನಿಗೆ ಇಂಗ್ಲಿಶ್ ಮಾಧ್ಯಮ ತುಸು ಕಷ್ಟವಾದರೂ ಸತತ ವಿದ್ಯಾಬ್ಯಾಸದೊಂದಿಗೆ ಬೇಗನೆ ಇಂಗ್ಲಿಶ್ ಮಾದ್ಯಮಕ್ಕೆ ಒಗ್ಗಿಕೊಂಡ, ಕನ್ನಡ ಶಾಲೆಯಲ್ಲಿನಂತೆ ಇಲ್ಲೂ ಎಲ್ಲಾ ತಿಂಗಳ ಪರೀಕ್ಷೆಗಳಲ್ಲಿ ಮೊದಲ ರ‍್ಯಾಂಕ್ ಬರತೊಡಗಿದ. ಮನುಷ್ಯ ಎಷ್ಟೆ ಭಾಷೆಗಳನ್ನ ಕಲಿತರೂ ಎಷ್ಟೆ ಭಾಷೆಗಳಿಗೆ ಒಗ್ಗಿಕೊಂಡರೂ ಮನಸ್ಸಿನ ಭಾಷೆ ಮಾತೃಭಾಷೆಯೇ ಆಗಿರುತ್ತದೆ. ಗೌತಮನಿಗೂ ಅದೇ ಭಾವನೆ. ಏಳನೇ ತರಗತಿಯವರೆಗಿನ ಕನ್ನಡ ಶಾಲೆಯ ಹಳೆಯ ಸ್ನೇಹಿತರನ್ನೆಲ್ಲಾ ಕಳೆದುಕೊಂಡು ಹೊಸಸ್ನೇಹಿತರೊದಿಗೆ ಆಗತಾನೆ ಬೆರೆತಿದ್ದ ಗೌತಮನಿಗೆ ಕನ್ನಡ ಶಾಲೆಯ ಸ್ನೇಹಿತರ ಬಳಗದ ಹಿತ ಅಷ್ಟಾಗಿ ದೊರೆಯುವುದಿಲ್ಲ, ಆದ್ರೂ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ತನ್ನ ತಂದೆಯ ಅಪ್ಪಣೆಯಂತೆ ಶ್ರದ್ದೆಯಿಂದ ವಿಧ್ಯಾಬ್ಯಾಸ ಮಾಡುತ್ತಾನೆ.

ಎಂಟನೆ ತರಗತಿ ಶುರುವಾದಗಿನಿಂದ ಕನ್ನಡದ ಮೇಷ್ಟ್ರು ಸಿದ್ದಲಿಂಗಸ್ವಾಮಿಯವರ ಬಗ್ಗೆ ತುಸು ಹೆಚ್ಚೆ ಗೌರವವಿರುತ್ತದೆ ಗೌತಮನಿಗೆ. ಅವರು ಪಾಠ ಮಾಡುವ ಶೈಲಿ,ಕೊಡುವ ವಿವರ, ಒಟ್ಟಾಗಿ ಸಿದ್ದಲಿಂಗಸ್ವಾಮಿಯಂದರೆ ಗೌತಮನಿಗೆ ಅಚ್ಚುಮೆಚ್ಚು.

ಸಿದ್ದಲಿಂಗಸ್ವಾಮಿಯವರು ಜಾತಿ ಮತ ಗೊತ್ತಿಲ್ಲದ ಒಬ್ಬ ಅನಾಥ, ಸಾರ್ಥಕ ಆಶ್ರಮದಲ್ಲಿ ಬೆಳೆದು ಅಲ್ಲಿಂದ ಗಂಗನೂರಿನ ಯುನಿವರ್ಸಿಟಿಯಲ್ಲಿ ಪಧವೀದರರಾಗಿ ಮತ್ತೆಲ್ಲೋ ತಮ್ಮ ಪಧವಿಗೆ ಸಂಭಂದವಿಲ್ಲದ ಉದ್ಯಮದಲ್ಲಿ ಕೆಲಸಮಾಡಿ ಮತ್ತೆ ತಮ್ಮ ಪಧವಿಯ ಆದಾರದ ಮೇಲೆ ಪಿ ಎಚ್ ಡಿ ಮಾಡಿ ಜಾತಿ, ದರ್ಮ, ಬದುಕು ಹೀಗೆ ಅನೇಕ ವಿಚಾರಗಳ ಬಗ್ಗೆ ತಮ್ಮದೇ ಆದ ವಾದಗಳನ್ನು ಮಂಡಿಸುತ್ತಾ ಕೆಲವು ಪುಸ್ತಕಗಳನ್ನು ಬರೆದು, ಮನುಷ್ಯನು ಬದುಕನ್ನುತನ್ನ ಜೀವಿತಾವದಿಯಲ್ಲಿ ಎಷ್ಟು ನೋಡಬಹುದೋ ಅದಕ್ಕಿಂತ ತುಸು ಹೆಚ್ಚೆ ನೋಡಿ ಅಂದರೆ ಮನುಷ್ಯನ ಬದುಕನ್ನ ಪೂರ 180 ಡಿಗ್ರಿಯಲ್ಲಿ ನೋಡಿ ಸಾಕಾಗಿ ತನ್ನ ಇಷ್ಟದ ವಿಷಯ ಕನ್ನಡದ ಶಿಕ್ಷಕರಾಗಿ ಮದನೂರಿನ S G K ಶಾಲೆಯಲ್ಲಿ ಸೇರಿರುತ್ತಾರೆ. ಅಮ್ಮು ಬಿಮ್ಮಿಲ್ಲದ ಇಡಿ ಬದುಕನ್ನ ಆರ್ಥಿಸಿಕೊಂಡ ಒಬ್ಬ ಪರಿಪೂರ್ಣ ವ್ಯಕ್ತಿ ಸಿದ್ದಲಿಂಗಸ್ವಾಮಿ


ಗೌತಮನಿಗೆ ಆಟದ ಅಂಗಳದಲ್ಲಿ ನೆಡೆದ ಘಟನೆ ತನ್ನ ತಂದೆ ನೀಡಿದ ಜಾತಿ ಬಗೆಗಿನ ಉಪದೇಶಗಳು ಮೆದುಳಲ್ಲಿ ಕೆಣಕುತ್ತಿರುತ್ತವೆ. ಈ ಅವಸ್ತೆಯಲ್ಲಿ ಸಿದ್ದಲಿಂಗಸ್ವಾಮಿಯವರ ಪ್ರಬುದ್ದತೆಯ ಮಾತುಗಳು ಇತೆರೆ ಶಿಕ್ಷಕರಿಗಿಂತ ಹೆಚ್ಚು ಆಕರ್ಶಿಸುತ್ತವೆ.


ಒಮ್ಮೆ ಹೀಗೆ ತರಗತಿಯಲ್ಲಿ ಕರ್ಣ ಹಾಗೂ ದುರ್ಯೊಧನ ಕತೆಯನ್ನು, ಕರ್ಣನ ಹುಟ್ಟು ಹಾಗೂ ಜಾತಿಯ ಬಗ್ಗೆ ಕೌರವರೆಲ್ಲಾ ನೋಡಿದ್ದ ರೀತಿ, ಕರ್ಣ ದುರ್ಯೊಧನರ ಸ್ನೇಹದ ಬಗ್ಗೆ ಕೊಟ್ಟ ವಿವರಣೆ ನೋಡಿ ಗೌತಮನಿಗೆ ಸಿದ್ದಲಿಂಗಸ್ವಾಮಿಯವರ ಬಗೆಗಿನೆ ಗೌರವ ಹಿಮ್ಮಡಿಯಾಗುತ್ತೆ.


ಕನ್ನಡದ ಮೇಷ್ಟ್ರು ಸಿದ್ದಲಿಂಗಸ್ವಾಮಿಯವರ ಹತ್ತಿರ ತನಗಿದ್ದ ಜಾತಿಯ ಬಗ್ಗೆ ಗೊಂದಲಗಳನ್ನು ಕೇಳಬೇಕು ಅವರನ್ನು ಏಕಾಂಗಿಯಾಗಿ ಬೇಟಿಯಾಗಬೇಕೆಂದು ಮನಸ್ಸಲ್ಲೆ ಚರ್ಚಸಿಕೊಂಡು ಸುಮ್ಮನಾಗುತ್ತಾನೆ.

ಅಷ್ಟರಲ್ಲಿ ಕಡುಗತ್ತಲ ರಾತ್ರಿಯಲ್ಲಿ ಶಾಂತಿಪರ್ವತದ ಅಭಯಾರಣ್ಯದಲ್ಲಿ ಹಿಮ್ಮಡಿಗಳಿಂದ ರಕ್ತಸುರಿದ ಪಾದಗಳನ್ನು ನೆಲದಮೇಲಿದ್ದ ಹುಲ್ಲು ಹಾಸಿಗೆ ಒರೆಸಿಗೊಂಡು ಹೆಜ್ಜೆಗಳನ್ನು ಇಡುತ್ತಾ ಮುಂದೆ ನೋಡಿದರೆ ಯಾರೋ ತನ್ನ ಎದುರಿಗೆ ಬರುತ್ತಿರುವಂತೆ ಬಾಸವಾಗುತ್ತದೆ,ಹಸುವಿನಿಂದ ಬಳಲುತ್ತಿದ್ದ ಗೌತಮನಿಗೆ ಎದರು ಬರುತ್ತಿರುವುದು ಮನುಷ್ಯನ ಆಕೄತಿಯಂತೆ ಕಂಡರೂ ದಿಟ್ಟಿಸಿ ನೋಡಲು ಕಣ್ಣುಗಳಲ್ಲಿ ಶಕ್ತಿಯಿರಲಿಲ್ಲ. ಒಂದೊಂದೇ ಹೆಜ್ಜೆಗಳನಿಡುತ್ತಾ ಹೋದಂತೆ ಆ ಆಕೃತಿಯೂ ಹತ್ತಿರವಾಗುತ್ತದೆ. ತಲೆಯೇ ಕಾಣದಂತೆ ಬೆಳೆದಿರುವ ಕೇಶರಾಶಿ, ಕೊರಳಿನ ತುಂಬಾ ರುದ್ರಾಕ್ಷಿ ಸರಗಳು ಮುಖವೇ ಕಾಣದಂತೆ ಬೆಳೆದಿರುವ ದಾಡೀ, ಆ ಕೊರೆಯುವ ಚಳಿಯಲ್ಲೂ ಸೊಂಟಕ್ಕೆ ಕಟ್ಟಿದ್ದ ಒಂದು ಬಟ್ಟೆ ಬಿಟ್ಟರೆ ಪೂರ ದೇಹ ಬೆತ್ತಲೆ, ಆ ಕತ್ತಲಲ್ಲೂ ಕಣ್ಣುಗಳು ಹೊಳೆಯುತ್ತಿದ್ದ ಕಾಂತಿಗೋ ಅಥವಾ ಹಸಿವಿನಿಂದ ಬಳಲುತ್ತಿದ್ದಕ್ಕೊ ಗೌತಮ ಮೊರ್ಛೆಗೆ ಜಾರಿ ಕೆಳಗೆ ಬಿದ್ದ.



ಮುಂದುವರೆಯುವುದು.......

ಮಂಗಳವಾರ, ಏಪ್ರಿಲ್ 14, 2015

ಪ್ರೀತಿಯ ಕಾಗದ

ನೀ ತುಳಿದದ್ದು ನಾ ಬರೆದ
ಕಾಗದವನ್ನಲ್ಲ...!
ನಿನಗಾಗೇ ಬರೆದ ನನ್ನ
ಮನಸಿನ ಸಾಲುಗಳನ್ನ..
ಸದಾ ನಿನ್ನ ನೆನಪಲ್ಲೇ ಉಳಿದಿದ್ದ
ಹೃದಯವನ್ನ..!!
ಅದು ಬರಿ ಕಾಗದವಲ್ಲ
ನನ್ನ ಪ್ರೀತಿಯನ್ನ ಪ್ರತಿ ಕ್ಷಣ
ಕೂಗಿ ಕೂಗಿ ಹೇಳುತ್ತಿದ್ದ
ನನ್ನ ಹೃದಯ...!!
ನೀ ಕೇಳುತ್ತಿದ್ದೆ ನೀನ್ನ ಪ್ರೀತಿ
ಎಲ್ಲಿದೆ ಎಂದು..?
ನಾ ಬರೆದ ಕಾಗದದಲ್ಲಿ ಕಾಣಲಿಲ್ಲವೆ
ಗೆಳತಿ ನನ್ನ ಪ್ರೀತಿ...!!

ಗೂಳೂರು ಚಂದ್ರು

ಸೋಮವಾರ, ಏಪ್ರಿಲ್ 6, 2015

ಮಳೆ ಹನಿ

ಜೋರು ಮಳೆಯಲಿ
ಅಳತೆ ಸಿಗದ ಬಯಲಲಿ
ನಿಂತಿರುವೆ ನಾನು
ದೇಹದ ಮೇಲೆ ಬೀಳುತ್ತಿರುವ
ಪ್ರತಿ ಹನಿಯಲ್ಲು ಸಾಗರದಷ್ಟು
ನೋವಿದೆ...!

ಮಳೆ ನಿಂತ ಮೇಲೆ ತಿಳಿದಿದ್ದು
ಆ ಹನಿಗಳು ನನ್ನ ಕಣ್ಣೀರಿನ
ಹನಿಗಳನ್ನು ಒರೆಸುತ್ತಿದ್ದವು ಎಂದು
ಆ ಮುಗಿಲಿಗೂ ನನ್ನಷ್ಟೇ ನೋವಿತ್ತೆಂದು..!!




ಗೂಳೂರು ಚಂದ್ರು

ಸೋಮವಾರ, ಮಾರ್ಚ್ 16, 2015

ವೋರೆಗಣ್ಣು

ಆ ವೋರೆಗಣ್ಣಿನ ನೋಟದಲ್ಲಿ ನನ್ನ ಮೇಲೆ
ನೀನಿಟ್ಟಿರುವ ಪ್ರೀತಿ ಅಡಗಿದೆ ಎಂದು
ನನಗೆ ತಿಳಿದಿಹುದು ಗೆಳತಿ...!
ನೀನು ಮಳ್ಳೀ ನಿನ್ನ ಮುಖಭಾವದಲ್ಲಿ
ಯಾರು ಏನನ್ನು ಗುರುತಿಸಲಾರರು
ಎಂದು ನೀ ತಿಳಿದಿರುವೆ ನೀ ನನ್ನ ಹೃದಯಲ್ಲಿ ಅಡಗಿರುವೆ
ನನ್ನ ಹೃದಯದ ಕಳವಳ, ಗೊಂದಲ ನನಗೆ ತಿಳಿಯದೇ....!!




ಗೂಳೂರು ಚಂದ್ರು

ಗುರುವಾರ, ಮಾರ್ಚ್ 12, 2015

ಕತ್ತಲೆ

ಕತ್ತಲೆಯ ಮನೆಯಲ್ಲಿ ಮರುಗುತಿಹುದು ಒಬ್ಬಂಟಿ ಮನಸ್ಸು....!
ಕಡುಗತ್ತಲ ರಾತ್ರಿಯಲಿ ಕೇಳುತ್ತಿರುವೇನು ನನ್ನ ಕಥೆಯನ್ನೇ....!!
ಕಣ್ಣಲ್ಲಿದ್ದ ನೀರು ಖಾಲಿಯಾದ ಮೇಲೆ ತಿಳಿಯಿತು ನಾ ಕೇಳುತ್ತಿರುವುದು ನನ್ನ ಕಥೆಯನ್ನೇ ಎಂದು..



ಗೂಳೂರು ಚಂದ್ರು